ಕರ್ನಾಟಕದಲ್ಲಿ ಆಳಿದ ಅರಸರ ರಾಣಿಯರಲ್ಲಿ ಈ ಹೆಸರಿನವರು ಹಲವರು. ಬಹುಶಃ ಚಂದ್ರಲೇಖಾ ಎಂಬ ಮೂಲ ಸಂಸ್ಕೃತರೂಪದ ಹೆಸರು ಚಂದಲದೇವಿ, ಚಂದಲಕಬ್ಬೆ, ಚಂದ್ರಿಕಾದೇವಿ, ಚಂದಲೆ, ಚಂದವ್ವೆ, ಚಂಡಾಂಬಿಕಾ, ಚಂದ್ರಾಂಬಿಕೆ, ಚಂದಿಕಬ್ಬೆ ಇತ್ಯಾದಿ ರೂಪಗಳಲ್ಲಿ ಕಾಣಿಸಿಕೊಂಡಿವೆ. ಚಂದಲದೇವಿ ಮತ್ತು ಆ ಹೆಸರಿನ ರೂಪಾಂತರಗಳಿದ್ದವರಲ್ಲಿ ಕೆಲವರನ್ನು ಕುರಿತ ವಿವರಣೆಯನ್ನಿಲ್ಲಿ ಕೊಡಲಾಗಿದೆ.

ಕಲ್ಯಾಣದಲ್ಲಿ ಆಳಿದ ಚಾಳುಕ್ಯ ಸೋಮೇಶ್ವರನ ಪತ್ನಿ ಚಂದಲಕಬ್ಬೆ ಅಥವಾ ಚಂದ್ರಿಕಾದೇವಿ. 1047-48ರ ನಿಂಬರಗಿ ಶಾಸನದಲ್ಲಿ ಈಕೆಯನ್ನು ಆತನ ಪಿರಿಯರಸಿ ಎಂದು ಕರೆಯಲಾಗಿದೆ.

ಹೆಚ್ಚು ಖ್ಯಾತಿ ಹೊಂದಿದವಳು ಆರ್ವಡಿ ವಿಕ್ರಮಾದಿತ್ಯನ ಪಟ್ಟಮಹಿಷಿ ಎನಿಸಿದ ಚಂದಲದೇವಿ ಅಥವಾ ಚಂದ್ರಲೇಖೆ. ಅನುಪಮ ಸುಂದರಿ ಎನಿಸಿದ್ದ ಈಕೆ ಶಿಲಾಹಾರ ಮನೆತನಕ್ಕೆ ಸೇರಿದವಳೆಂದೂ ಸ್ವಯಂವರ ಸಭೆಯಲ್ಲಿ ವಿಕ್ರಮಾದಿತ್ಯನನ್ನು ವರಿಸಿದಳೆಂದೂ ಬಿಲ್ಹಣ ತನ್ನ ವಿಕ್ರಮಾಂಕದೇವಚರಿತದಲ್ಲಿ ತಿಳಿಸಿದ್ದಾನೆ. ಈಕೆ ಅರಸನ ವಿಶೇಷವಾದ ಪ್ರೀತಿಗೆ ಪಾತ್ರಳಾಗಿದ್ದುದಲ್ಲದೆ, ಆತನಿಗೆ ಆಡಳಿತದಲ್ಲಿ ಸಹಾಯಕಳಾಗಿಯೂ ಇದ್ದಳು. ರಾಜಧಾನಿಗೆ ಸಮೀಪದಲ್ಲಿದ್ದ ಅಳಂದೆ ಸಾಸಿರ ಎಂಬ ಪ್ರಾಂತ್ಯದ ಆಡಳಿತದ ಹೊಣೆ ಈಕೆಯದಾಗಿತ್ತು. ಈಕೆ ಆಳಂದೆ ಸಾಸಿರ ಪ್ರಮುಖವನೇಕಭತ್ತಗ್ರಾಮಂಗಳುಮಂ ಆ¿್ದರಸುಗೆಯ್ಯುತ್ತಿದ್ದಳೆಂದು ಶಾಸನಗಳಲ್ಲಿ ಹೇಳಿದೆ. ಈಕೆಯನ್ನು ನೃತ್ಯವಿದ್ಯಾಧರಿ, ಸಕಳಕಳಾಧರಿ, ಅಭಿನವ ಸರಸ್ವತಿ ಎಂದೆಲ್ಲ ವರ್ಣಿಸಲಾಗಿದೆ. ಸೋಮಭೂಪ, ಜಯಕರ್ಣ, ಕುಮಾರ ತೈಲರು ಈಕೆಯ ಮಕ್ಕಳು. ಇವರಲ್ಲಿ ಸೋಮಭೂಪನೇ ಮುಂದೆ ಭೂಲೋಕಮಲ್ಲ ಸೋಮೇಶ್ವರನೆಂಬ ಹೆಸರಿನಿಂದ ಆಳಿದ. ಎರಡನೆಯ ಕಳಚುರಿ ಬಿಜ್ಜಲ ಈಕೆಯ ಮೊಮ್ಮಗನೆಂದು ವಳಸಂಗದ ಶಾಸನದಿಂದ ತಿಳಿದಿದೆ. ಆದ್ದರಿಂದ ಬಿಜ್ಜಲನ ತಾಯಿಯಾದ ನಾಗಲದೇವಿ ಚಂದಲದೇವಿಯ ಮಗಳೆಂದು ಊಹಿಸಲಾಗಿದೆ.

ಚಾಳುಕ್ಯರ ಆಸ್ಥಾನದಲ್ಲಿ ವಣಿಕಶ್ರೇಷ್ಠನೆನಿಸಿದ ರಾಯರಸೆಟ್ಟಿಯ ಪತ್ನಿ ಚಂದವ್ವೆ ಎಂಬಾಕೆ ಕರ್ನೂಲು ಜಿಲ್ಲೆಯ ಕಮ್ಮರಜೇಡು ಗ್ರಾಮದಲ್ಲಿ ವರ್ಧಮಾನ ವಿಗ್ರಹವೊಂದನ್ನು ಪುನಃ ಪ್ರತಿಷ್ಠಾಪಿಸಿದಳು. ಈಕೆ ಜೈನಮುನಿಯಾದ ಪದ್ಮ ಪ್ರಭಮಲಧಾರಿ ದೇವರ ಪ್ರಿಯ ಗುಡ್ಡಿಯಾಗಿದ್ದಳು.
ಹೊಯ್ಸಳ ವಿಷ್ಣುವರ್ಧನನ ಪತ್ನಿಯರಲ್ಲಿ ಚಂದಲದೇವಿ ಎಂಬವಳೂ ಒಬ್ಬಳು. ಈಕೆ ಕೊಂಗಾಳ್ವ ಮನೆತನಕ್ಕೆ ಸೇರಿದವಳು ಎಂದು ಹೇಳಲಾಗಿದೆಯಾದರೂ ಇದು ಸಂದೇಹಾಸ್ಪದವಾಗಿದೆ.

ಕೂಂಡಿ ಪ್ರಾಂತ್ಯಾಧಿಕಾರಿಯಾಗಿ ಆಳಿದ ಸವದತ್ತಿಯ ರಟ್ಟ ಎಂಬ ಮಾಂಡಲಿಕ ಮನೆತನದ 1ನೆಯ ಲಕ್ಷ್ಮೀದೇವನ ಪತ್ನಿ ಹಾಗೂ 4ನೆಯ ಕಾರ್ತವೀರ್ಯನ ತಾಯಿಯ ಹೆಸರು ಸಹ ಚಂದಲದೇವಿ. ಯಾದವಕುಲಕ್ಕೆ ಸೇರಿದ ರಾಜ ಎಂಬವನ ಪುತ್ರಿಯಾದ ಈಕೆಗೆ ಮಲ್ಲಿಕಾರ್ಜುನನೆಂಬ ಇನ್ನೊಬ್ಬ ಮಗ ಇದ್ದ. ಶಾಸನದಲ್ಲಿ ಈಕೆಯನ್ನು ಚಂದ್ರಿಕೆ, ಚಂದ್ರಿಕಾದೇವಿ ಎಂದೂ ಕರೆಯಲಾಗಿದೆ.

ಹೊಯ್ಸಳ ಇಮ್ಮಡಿ ಬಲ್ಲಾಳನ ಅಮಾತ್ಯನಾಗಿದ್ದ ನಾಗದೇವನ ಪತ್ನಿ ಚಂದಲದೇವಿ. ಈಕೆ ಪಟ್ಟಣಸ್ವಾಮಿ ಎನಿಸಿದ ಮಲ್ಲಸೆಟ್ಟಿ ಮತ್ತು ಮಾಚವೆಸೆಟ್ಟಿಕವ್ವೆಯ ಮಗಳು. ಈಕೆಯ ಮೊಮ್ಮಗಳಾದ ಮಾಚಿಕಬ್ಬೆ ಖ್ಯಾತಳಾದ ಶಾಂತಲದೇವಿಯ ತಾಯಿ.

16ನೆಯ ಶತಮಾನದ ಮಧ್ಯಭಾಗದಲ್ಲಿ ಘಟ್ಟದ ಕೆಳಗಣ ಮತ್ತು ಘಟ್ಟದ ಮೇಲಣ ತುಳುರಾಜ್ಯವನ್ನು ಆಳುತ್ತಿದ್ದ ಕಳಸ-ಕಾರ್ಕಳದ ಒಡೆಯನಾಗಿದ್ದ ವೀರಪಾಂಡ್ಯಪ್ಪೊಡೆಯನ ತಾಯಿ ಚಂದಲದೇವಿ. ಈಕೆ ಕೆರವಸೆ ರಾಜ್ಯಕ್ಕೆ ಸೇರಿದ ರಾಜಕುಮಾರಿಯಾಗಿದ್ದಳು.			(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ